ಸಾಹಿತ್ಯ
ಬೆದಂಡೆ ಮತ್ತು ಚತ್ತಾಣ

ಒಂಬತ್ತನೆಯ ಶತಮಾನಕ್ಕಿಂತ ಮುಂಚಿತವಾಗಿಯೇ, ಕನ್ನಡದಲ್ಲಿ ಅನೇಕ ಸಾಹಿತ್ಯಪ್ರಕಾರಗಳು ಮತ್ತು ಛಂದೋರೂಪಗಳು ಬಳಕೆಯಲ್ಲಿದ್ದವು. ಇವುಗಳನ್ನು ಕುರಿತ ಮಾಹಿತಿಯು ನಮಗೆ ಹಲವು ಕಡೆ ದೊರಕುತ್ತವೆ. ಆದರೆ, ಇವುಗಳನ್ನು ಉಪಯೋಗಿಸಿ ರಚಿತವಾದ ಯಾವುದೇ ಸಾಹಿತ್ಯಕೃತಿಯೂ ಲಭ್ಯವಾಗಿಲ್ಲ. ಪರಿಣಾಮವಾಗಿ, ಇವುಗಳ ಗುಣ ಲಕ್ಷಣಗಳನ್ನು ಕುರಿತ ಚರ್ಚೆಯು ಕಷ್ಟಸಾಧ್ಯವಾಗಿದೆ. ಆದರೆ, ಈ ಉಲ್ಲೇಖಗಳು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ತೀರ್ಮಾನಿಸುವ ಕೆಲಸದಲ್ಲಿ ನೆರವು ನೀಡುತ್ತವೆ. ಬೆದಂಡೆ ಮತ್ತು ಚತ್ತಾಣ ಎಂಬ ಪ್ರಕಾರಗಳನ್ನು ಈ ಗುಂಪಿಗೆ ಸೇರಿಸಬಹುದು. ಶ್ರೀವಿಜಯನ ಕವಿರಾಜಮಾರ್ಗ, ನಾಗವರ್ಮನ ಕಾವ್ಯಾವಲೋಕನ ಮತ್ತು ಕೇಶಿರಾಜನ ಶಬ್ದಮಣಿದರ್ಪಣಗಳಲ್ಲಿ ಇವುಗಳ ಉಲ್ಲೇಖವಿದೆ.

ಬೆದಂಡೆಯನ್ನು ಹಾಡುಗಬ್ಬಗಳ ಗುಂಪಿಗೆ ಸೇರಿಸಬೇಕೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬೆದಂಡೆ ಮತ್ತು ಮೇಲ್ಪಾಡು ಎಂಬ ಎರಡೂ ರೂಪಗಳು ಪಾಡುಗಬ್ಬಗಳಿಂದಲೇ ಬಂದಿವೆಯೆಂದು ನಾಗವರ್ಮನು ಅಭಿಪ್ರಾಯ ಪಡುತ್ತಾನೆ. ಬೆದಂಡೆಯಲ್ಲಿ ರಸ ಮತ್ತು ಅಲಂಕಾರಗಳು ಇರುತ್ತವೆಂದು ಹೇಳಲಾಗಿದೆ. ಆದ್ದರಿಂದ ಅದರಲ್ಲಿ ಕಥೆ ಮತ್ತು ಪಾತ್ರಚಿತ್ರಣಗಳೂ ಇರಬೇಕು. ಕವಿರಾಜಮಾರ್ಗಕಾರನಾದ ಶ್ರೀವಿಜಯನು, ಬೆದಂಡೆಯಲ್ಲಿ ಕಂದಪದ್ಯಗಳು ಮತ್ತು ವೃತ್ತಗಳು ಮಾತ್ರವಲ್ಲ, ಮೂಲಗನ್ನಡಕ್ಕೆ ಸಹಜವಾದ ಛಂದೋಬಂಧಗಳೂ(ಜಾತಿ) ಇರುತ್ತವೆಂದು ಹೇಳಿದ್ದಾನೆ. ಹಾಗಾದರೆ, ಬೆದಂಡೆಯು ಅಕ್ಷರಗಣ, ಮಾತ್ರಾಗಣ ಮತ್ತು ಅಂಶಗಣಗಳೆಂಬ ಮೂರೂ ಬಗೆಗಳನ್ನೂ ಒಳಗೊಂಡಿರುವ ಅಪರೂಪದ ಪ್ರಕಾರವೆಂದು ತೀರ್ಮಾನಿಸಬಹುದು. ಇದು ನಿಜವಾದರೆ, ಈ ಮೂರು ಮಾದರಿಗಳನ್ನೂ ಸಂಗೀತಕ್ಕೆ ಅಳವಡಿಸಬಹುದೆಂದು ತೋರುತ್ತದೆ. ಈ ಸಂಗತಿಯು, ಕೇವಲ ಅಂಶಗಣ ಛಂದಸ್ಸಿನ ಪದ್ಯಗಳನ್ನು ಹಾಡಲು ಸಾಧ್ಯವೆಂಬ ಇದುವರೆಗಿನ ನಂಬಿಕೆಗೆ ವಿರುದ್ಧವಾಗಿದೆ.

ಸಂಗೀತಶಾಸ್ತ್ರದ ನೆಲೆಯಿಂದ ನೋಡಿದಾಗ, ಬೆದಂಡೆಯು ದೇಸೀ ವಾದ್ಯಗಳ ಹಿನ್ನೆಲೆಯಲ್ಲಿ ಹಾಡುತ್ತಿದ್ದ ರೂಪ. ಅದನ್ನು ವೀಣೆಯಂತಹ ಕ್ಲಾಸಿಕಲ್ ವಾದ್ಯದ ಸಂಗಡ ಹಾಡುವುದು ಸಾಧ್ಯವಿರಲಿಲ್ಲ. ಬೆದಂಡೆ ಎಂಬ ಪದದ ಅರ್ಥವೇ ದಂಡಿಗೆ ಇಲ್ಲದ ಎಂಬುದಾಗಿದೆ. ದಂಡಿಗೆ ಎಂದರೆ ವೀಣೆ. ಆದ್ದರಿಂದ ಬೆದಂಡೆಯು ಚಂಪೂಗಿಂತ ಪ್ರಾಚೀನವಾದ ರೂಪವೆಂದು ತೋರುತ್ತದೆ. ಅದರಲ್ಲಿ, ಗದ್ಯಕ್ಕೆ ಯಾವುದೇ ಸ್ಥಾನವಿರುವಂತೆ ತೋರುವುದಿಲ್ಲ.

ಚತ್ತಾಣವು, ಬೆದಂಡೆಯ ಇನ್ನೊಂದು ಪ್ರಭೇಧವೆಂದು ತೋರುತ್ತದೆ. ಇದರಲ್ಲಿ ಮೂಲ ಕನ್ನಡದ ಛಂಧೋರೂಪಗಳಿಗೆ ಹೆಚ್ಚಿನ ಅವಕಾಶವಿತ್ತು. ಚತ್ತಾಣದಲ್ಲಿ ತ್ರಿಪದಿ, ಚೌಪದಿ ಮುಂತಾದ ರೂಪಗಳನ್ನು ವಿಪುಲವಾಗಿ ಬಳಸುತ್ತಿದ್ದರು. ಚತ್ತಾಣ ಎಂಬ ಪದದ ಮೂಲವನ್ನು ಯಕ್ಷಗಾನದಲ್ಲಿ ಹುಡುಕುವ ಕೆಲವು ವಿದ್ವಾಂಸರ ಪ್ರಯತ್ನವು, ದೂರಾನ್ವಯವೆಂದು ತೋರುತ್ತದೆ. ಏನೇ ಆದರೂ ಈ ರೂಪಗಳು ಸಂಸ್ಕೃತ ಛಂದಸ್ಸಿಗಿಂತ ದ್ರಾವಿಡ ಛಂದಸ್ಸಿನ ಕಡೆಗೆ ಒಲಿಯುತ್ತವೆಂದು ಕಾಣುತ್ತದೆ. ಇತ್ತೀಚೆಗೆ ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಈ ರೂಪಗಳನ್ನು ಜನಸಾಮಾನ್ಯರು ತಮ್ಮ ಮನರಂಜನೆಗೆಂದು ಸೃಷ್ಟಿಸಿ ಹಾಡುತ್ತಿದ್ದರೆಂದು ಅಭಿಪ್ರಾಯ ಪಟ್ಟಿದ್ದಾರೆ. ಅವರ ಪ್ರಕಾರ ಶಿಷ್ಟ ಸಾಹಿತ್ಯದ ಒತ್ತಡಗಳಿಂದ ಈ ರೂಪಗಳು ಹಿನ್ನೆಲೆಗೆ ಸರಿದವು.

ಮುಖಪುಟ / ಸಾಹಿತ್ಯ